
ಮಾಜಿ ಸಚಿವ ಗಾಯತ್ರಿ
ಲಕ್ನೋ 1/10/2025: ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ಜೈಲಿನಲ್ಲಿರುವ ಸಮಾಜವಾದಿ ಪಕ್ಷದ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಗಾಯತ್ರಿ ಪ್ರಸಾದ್ ಪ್ರಜಾಪತಿ ಮೇಲೆ ಸಹ ಕೈದಿಯೊಬ್ಬ ಹಲ್ಲೆ ನಡೆಸಿದ ಘಟನೆ ನಡೆದಿದೆ. ಪ್ರಜಾಪತಿ ಅವರ ತಲೆಗೆ ಮತ್ತೊಬ್ಬ ಕೈದಿ ಹಲವು ಬಾರಿ ಇರಿದಿದ್ದಾನೆ. ದಾಳಿಯಿಂದ ಅವರಿಗೆ ಗಂಭೀರ ಗಾಯಗಳಾಗಿದ್ದು, ಜೈಲು ಅಧಿಕಾರಿಗಳು ತಕ್ಷಣ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆಯ ಕುರಿತು ಲಕ್ನೋ ಜೈಲು ಅಧೀಕ್ಷಕರು ಮಾತನಾಡಿ, “ಗಾಯತ್ರಿ ಪ್ರಜಾಪತಿ ಅವರು ಬೇರೊಬ್ಬ ಕೈದಿ ಜೊತೆ ಜಗಳವಾಡುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಪರಿಸ್ಥಿತಿ ವಿಕೋಪಕ್ಕೆ ಹೋಗಿ ಕೈದಿ ಗಾಯತ್ರಿ ಪ್ರಜಾಪತಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ದಾಳಿಯಿಂದ ಪ್ರಜಾಪತಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಜಾಪತಿ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಜಗಳಕ್ಕಿದ ಕಾರಣ ತಿಳಿದು ಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ” ಎಂದು ಮಾಹಿತಿ ನೀಡಿದ್ದಾರೆ.
ಗಾಯತ್ರಿ ಪ್ರಜಾಪತಿ ಅವರು ಸಮಾಜವಾದಿ ಪಕ್ಷದ ಪ್ರಭಾವಿ ನಾಯಕರಾಗಿದ್ದು, ಅಖಿಲೇಶ್ ಯಾದವ್ ಸರ್ಕಾರದಲ್ಲಿ ಸಚಿವರಾಗಿದ್ದರು. 2017ರಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಅವರ ಹೆಸರು ಕೇಳಿ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜಾಪತಿಯನ್ನು ಬಂಧಿಸಲಾಗಿತ್ತು. ಅಂದಿನಿಂದ ಅವರು ಲಕ್ನೋ ಜೈಲಿನಲ್ಲಿದ್ದಾರೆ. ಅವರ ಮೇಲೆ ನಡೆದ ಹಲ್ಲೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ. ಜೈಲುಗಳಲ್ಲಿನ ಕೈದಿಗಳ ಸುರಕ್ಷತೆ ಬಗ್ಗೆ ಪ್ರಶ್ನೆಗಳನ್ನು ಎತ್ತಿವೆ. ಈ ಹಿಂದೆ ಕೂಡ ಪ್ರಜಾಪತಿ ಮೇಲೆ ಹಲ್ಲೆ ನಡೆದಿತ್ತು ಎನ್ನಲಾಗಿದೆ. ಆದರೆ, ಈ ಪ್ರಮಾಣದ ಗಾಯಗಳು ಆಗಿರಲಿಲ್ಲ.
ಈ ಘಟನೆ ಜೈಲುಗಳ ಸುರಕ್ಷತೆ ಮತ್ತು ಕೈದಿಗಳ ಮೇಲಿನ ನಿಗಾ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಜೈಲಿನೊಳಗಡೆ ಚಾಕು ಹೇಗೆ ಬಂತು ಎಂಬುವುದರ ಬಗ್ಗೆ ತನಿಖೆ ನಡೆಸಬೇಕಿದೆ. ಅಲ್ಲದೆ, ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Leave a Reply