
ದೀರ್ಘಕಾಲೀನ ಹೂಡಿಕೆಯ ಅದ್ಭುತ: ₹1000ಕ್ಕೆ ₹1.85 ಕೋಟಿ!
ಬೆಂಗಳೂರು 9/10/2025: “ಸರಿಯಾದ ಷೇರನ್ನು ಖರೀದಿಸಿ, ಮರೆತುಬಿಡಿ” ಎಂಬ ಷೇರು ಮಾರುಕಟ್ಟೆಯ ಹಳೆಯ ಮಾತಿಗೆ ಅತ್ಯುತ್ತಮ ಉದಾಹರಣೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಕೇವಲ ₹1000 ಹೂಡಿಕೆಗೆ ಬರೋಬ್ಬರಿ ₹1.85 ಕೋಟಿ ರಿಟರ್ನ್ಸ್ ಪಡೆದ ಹೂಡಿಕೆದಾರನ ಅದೃಷ್ಟ ಮತ್ತು ತಾಳ್ಮೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.
1995ರಲ್ಲಿ ಓರ್ವ ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಆಗಿನ ‘ಜಿಂದಾಲ್ ವಿಜಯನಗರ ಸ್ಟೀಲ್ ಲಿಮಿಟೆಡ್’ (JVSL) ಕಂಪನಿಯ 100 ಷೇರುಗಳನ್ನು ಖರೀದಿಸಿದ್ದರು. ಪ್ರತಿ ಷೇರಿಗೆ ₹10 ರಂತೆ, ಅವರ ಒಟ್ಟು ಹೂಡಿಕೆ ಕೇವಲ ₹1000 ಆಗಿತ್ತು. ಈ ಶೇರು ಪ್ರಮಾಣಪತ್ರಗಳು ಮನೆಯಲ್ಲಿ ಎಲ್ಲೋ ಉಳಿದು, ಕಾಲಾನಂತರದಲ್ಲಿ ಮರೆತುಹೋಗಿದ್ದವು.
ಸುಮಾರು ಮೂರು ದಶಕಗಳ ನಂತರ ಆ ಹಳೆಯ ಪ್ರಮಾಣಪತ್ರಗಳು ಆ ವ್ಯಕ್ತಿಗೆ ಸಿಕ್ಕಾಗ, ಅವುಗಳ ಇಂದಿನ ಮೌಲ್ಯವನ್ನು ತಿಳಿದು ಅವರು ದಂಗಾಗಿದ್ದಾರೆ. 1995ರಲ್ಲಿ ಕೇವಲ ₹1000 ಮೌಲ್ಯದ ಈ ಷೇರುಗಳ ಪ್ರಸ್ತುತ ಮೌಲ್ಯ ₹1.85 ಕೋಟಿ ರೂಪಾಯಿಗೆ ಏರಿಕೆ ಕಂಡಿದೆ!
ಅದೃಷ್ಟ ಬದಲಿಸಿದ ಕಾರ್ಪೊರೇಟ್ ಕ್ರಮಗಳು:
ಈ ಅಸಾಧಾರಣ ಬೆಳವಣಿಗೆಯ ಹಿಂದೆ ಕಂಪನಿಯ ಎರಡು ಪ್ರಮುಖ ಕಾರ್ಪೊರೇಟ್ ಕ್ರಮಗಳಿವೆ. ಮೊದಲನೆಯದಾಗಿ, 2005 ರಲ್ಲಿ ಜಿಂದಾಲ್ ವಿಜಯನಗರ ಸ್ಟೀಲ್ (JVSL) ಕಂಪನಿಯು ‘ಜೆಎಸ್‌ಡಬ್ಲ್ಯೂ ಸ್ಟೀಲ್’ (JSW Steel) ಜೊತೆ ವಿಲೀನವಾಯಿತು. ಇದರಿಂದ ಹೂಡಿಕೆದಾರರ ಷೇರುಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಯಿತು. ನಂತರ 2017 ರಲ್ಲಿ ಷೇರು ವಿಭಜನೆ (Stock Split) ನಡೆಯಿತು. ಈ ವಿಭಜನೆಯಿಂದಾಗಿ ಒಂದು ಷೇರು ಹಲವು ಷೇರುಗಳಾಗಿ ಮಾರ್ಪಟ್ಟವು, ಮೂಲ ಹೂಡಿಕೆದಾರರ ಒಟ್ಟು ಷೇರುಗಳ ಸಂಖ್ಯೆ ಮತ್ತಷ್ಟು ಏರಿತು.
ಮೂಲ 100 JVSL ಷೇರುಗಳು, ವಿಲೀನ ಮತ್ತು ಷೇರು ವಿಭಜನೆಯ ನಂತರ ಸಾವಿರಾರು JSW ಸ್ಟೀಲ್ ಷೇರುಗಳಾಗಿ ಪರಿವರ್ತನೆಯಾದವು. ಪ್ರಸ್ತುತ ಜೆಎಸ್‌ಡಬ್ಲ್ಯೂ ಸ್ಟೀಲ್‌ನ ಪ್ರತಿ ಷೇರಿನ ಬೆಲೆ ಸುಮಾರು ₹1,155 ರೂಪಾಯಿಗಳಷ್ಟಿದೆ. ಈ ಲೆಕ್ಕಾಚಾರದಲ್ಲಿ, ಮೂಲ ₹1000 ಹೂಡಿಕೆಯು ಇಂದು ₹1.85 ಕೋಟಿಯ ಬೃಹತ್ ಸಂಪತ್ತಾಗಿ ಮಾರ್ಪಾಡಾಗಿದೆ.
ಈ ಕಥೆ ಹಳೆಯ ಷೇರು ಪ್ರಮಾಣಪತ್ರಗಳನ್ನು ಪತ್ತೆ ಹಚ್ಚುವ ಮಹತ್ವವನ್ನು ಒತ್ತಿಹೇಳುತ್ತದೆ. ಅಷ್ಟೇ ಅಲ್ಲದೆ, ಷೇರು ಮಾರುಕಟ್ಟೆಯಲ್ಲಿ ದೀರ್ಘಕಾಲೀನ ಮತ್ತು ಶಿಸ್ತಿನ ಹೂಡಿಕೆಯ ಶಕ್ತಿಯನ್ನು ಮತ್ತು ಅದ್ಭುತವಾದ ಸಂಪತ್ತು ಸೃಷ್ಟಿಸುವ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದೆ. ಈ ಅದ್ಭುತ ರಿಟರ್ನ್ ಕಂಡ ಹೂಡಿಕೆದಾರನ ಅದೃಷ್ಟಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.
Subscribe to get access
Read more of this content when you subscribe today.
Leave a Reply