
ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಪೊಲೀಸ್ ಅಧಿಕಾರಿಗಳ ಸಭೆಯ ಬಳಿಕ ಮಾಧ್ಯಮಗಳಿಗೆ, ‘ಮಾಹಿತಿದಾರರು ಮತ್ತು ಡ್ರಗ್ ಪೆಡ್ಲರ್ಗಳ ನಡುವಿನ ಸಂಬಂಧವನ್ನು ಪರಿಶೀಲಿಸುವಂತೆ ಮತ್ತು ಅಂತಹ ಸಂಪರ್ಕದಲ್ಲಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಲಾಗಿದೆ,’ ಎಂದು ಹೇಳಿದ್ದಾರೆ. ಸಾರ್ವಜನಿಕರ ದೂರುಗಳು ಮತ್ತು ಆಂತರಿಕ ಗುಪ್ತಚರ ವರದಿಗಳ ಪ್ರಕಾರ, ಕೆಲವು ಪೊಲೀಸ್ ಸಿಬ್ಬಂದಿ ಮಾದಕ ವಸ್ತುಗಳ ಮಾರಾಟಗಾರರಿಗೆ ರಕ್ಷಣೆ ನೀಡುವುದರ ಜೊತೆಗೆ ಮಾದಕ ವಸ್ತು ಕಳ್ಳಸಾಗಣೆಯಲ್ಲಿ ತೊಡಗಿದ್ದಾರೆ. ಈ ಆರೋಪಗಳು ರಾಜ್ಯದ ಪೊಲೀಸ್ ವ್ಯವಸ್ಥೆಯ ನೈತಿಕತೆ ಮತ್ತು ವಿಶ್ವಾಸಾರ್ಹತೆಯ ಮೇಲೆ ಗಂಭೀರ ಪರಿಣಾಮ ಬೀರಿದೆ.
ಕಳೆದ ಕೆಲವು ವರ್ಷಗಳಲ್ಲಿ, ಸಾರ್ವಜನಿಕರು ಮತ್ತು ರಾಜಕಾರಣಿಗಳಿಂದಲೂ ಪೋಲೀಸ್ ಅಧಿಕಾರಿಗಳು ಮಾದಕ ವಸ್ತುಗಳ ಮಾರಾಟದ ಜಾಲದೊಂದಿಗೆ ಕೈ ಜೋಡಿಸಿದ್ದಾರೆ ಎಂಬ ದೂರುಗಳು ಹೆಚ್ಚಾಗಿವೆ. ಡ್ರಗ್ಸ್ ಮಾಫಿಯಾದ ನಿಯಂತ್ರಣಕ್ಕಾಗಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೂ, ಪೊಲೀಸರೇ ಡ್ರಗ್ ಪೆಡ್ಲರ್ಗಳಿಗೆ ಸಹಕಾರ ನೀಡುತ್ತಿರುವುದು ಬೆಳಕಿಗೆ ಬಂದಿದೆ. ಈ ಬೆಳವಣಿಗೆ ರಾಜ್ಯದ ಜನರ ಮನಸ್ಸಿನಲ್ಲಿ ಕಳವಳ ಮೂಡಿಸಿದೆ. ಮಾದಕ ವಸ್ತುಗಳ ವಿರುದ್ಧದ ಹೋರಾಟಕ್ಕೆ ಸರ್ಕಾರ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ಪೊಲೀಸ್ ಇಲಾಖೆಯೊಳಗಿನ ಭ್ರಷ್ಟಾಚಾರ ಈ ಪ್ರಯತ್ನಗಳಿಗೆ ಹಿನ್ನಡೆಯುಂಟು ಮಾಡುತ್ತಿದೆ.
ಪೊಲೀಸ್ ಇಲಾಖೆಯಲ್ಲಿನ ಈ ಬೆಳವಣಿಗೆಗಳ ಬಗ್ಗೆ ಪೊಲೀಸ್ ಮಹಾನಿರ್ದೇಶಕರು ಗಂಭೀರ ನಿಲುವು ತೆಗೆದುಕೊಂಡಿದ್ದಾರೆ. ಎಲ್ಲಾ ಪೊಲೀಸ್ ಅಧಿಕಾರಿಗಳ ಸೇವಾ ದಾಖಲೆಗಳನ್ನು ಪರಿಶೀಲಿಸಲು ಆದೇಶಿಸಲಾಗಿದೆ. ವಿಶೇಷವಾಗಿ ಕರಾವಳಿ ಮತ್ತು ಕರ್ನಾಟಕದಾದ್ಯಂತ ಡ್ರಗ್ಸ್ ಹಾಟ್-ಸ್ಪಾಟ್ ಪ್ರದೇಶಗಳಲ್ಲಿ ಕೆಲಸ ಮಾಡುವವರ ಬಗ್ಗೆ ಹೆಚ್ಚು ಗಮನಹರಿಸಲಾಗುವುದು. ಈ ನಿರ್ಧಾರವು ಪೊಲೀಸ್ ಇಲಾಖೆಯೊಳಗಿನ ಭ್ರಷ್ಟಾಚಾರವನ್ನು ನಿಯಂತ್ರಿಸಲು ಮತ್ತು ಮಾದಕವಸ್ತು ಮುಕ್ತ ಸಮಾಜ ನಿರ್ಮಾಣದ ಗುರಿಯನ್ನು ಸಾಧಿಸಲು ಒಂದು ಪ್ರಮುಖ ಹೆಜ್ಜೆಯಾಗಿದೆ.
ಈ ಸಂದರ್ಭದಲ್ಲಿ, ಬೆಂಗಳೂರಿನ ಡಿಸಿಪಿ (ದಕ್ಷಿಣ ವಿಭಾಗ) ಕ್ರಿಮಿನಲ್ ಹಿನ್ನೆಲೆಯ ಕೆಲವು ಗೂಂಡಾಗಳು ಹಾಗೂ ಮಾದಕ ವಸ್ತುಗಳ ಮಾರಾಟಗಾರರಿಗೆ ರಕ್ಷಣೆ ನೀಡುವುದರಲ್ಲಿ ಭಾಗಿಯಾಗಿದ್ದಕ್ಕಾಗಿ, ಸಿಸಿಬಿ ಇನ್ಸ್‌ಪೆಕ್ಟರ್ ಸೇರಿದಂತೆ 11 ಮಂದಿ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದಾರೆ. ಈ ಬೆಳವಣಿಗೆಯು ಪೋಲೀಸ್ ಇಲಾಖೆಯೊಳಗೆ ಸ್ವಯಂ ಶುದ್ಧೀಕರಣದ ಪ್ರಕ್ರಿಯೆ ಪ್ರಾರಂಭವಾಗಿರುವುದನ್ನು ಸೂಚಿಸುತ್ತದೆ. ಭವಿಷ್ಯದಲ್ಲಿ ಇಂತಹ ಪ್ರಕರಣಗಳು ಸಂಭವಿಸದಂತೆ ನೋಡಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಬಹಳ ಮುಖ್ಯ.
ಈ ಘಟನೆಗಳಿಂದ ಸಾರ್ವಜನಿಕರ ವಿಶ್ವಾಸಕ್ಕೆ ಧಕ್ಕೆ ಉಂಟಾಗಿದ್ದು, ಪೊಲೀಸರ ಮೇಲೆ ದೂರುಗಳು ಬಂದಾಗ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಸರ್ಕಾರ ಮತ್ತು ಪೊಲೀಸ್ ಇಲಾಖೆ ಭರವಸೆ ನೀಡಿವೆ. ಮಾದಕ ವಸ್ತುಗಳ ಮಾರಾಟದ ವಿರುದ್ಧದ ಹೋರಾಟವನ್ನು ಇನ್ನಷ್ಟು ಬಲಪಡಿಸಲು ಮತ್ತು ಪೋಲೀಸ್ ಇಲಾಖೆಯ ಘನತೆಯನ್ನು ಮರುಸ್ಥಾಪಿಸಲು ಈ ಕ್ರಮಗಳು ಅತ್ಯಗತ್ಯವಾಗಿವೆ. ಈ ಸವಾಲು ಎದುರಿಸಲು ಸರ್ಕಾರ ಮತ್ತು ಪೋಲೀಸ್ ಇಲಾಖೆಯು ಸಂಘಟಿತ ಪ್ರಯತ್ನಗಳನ್ನು ಮಾಡಬೇಕು, ಮತ್ತು ಸಾರ್ವಜನಿಕರು ಕೂಡ ಈ ಹೋರಾಟದಲ್ಲಿ ಕೈ ಜೋಡಿಸಬೇಕು. ಈ ಮೂಲಕ, ಕರ್ನಾಟಕವನ್ನು ಮಾದಕ ವಸ್ತು ಮುಕ್ತ ರಾಜ್ಯವನ್ನಾಗಿ ಪರಿವರ್ತಿಸಲು ಸಾಧ್ಯವಾಗುತ್ತದೆ.
Subscribe to get access
Read more of this content when you subscribe today.








